ವಾಷಿಂಗ್‍ಟನ್, ಜಾರ್ಜ್
	1732-99. ಅಮೆರಿಕದ ಪ್ರಥಮ ಅಧ್ಯಕ್ಷ (1789-97) ಹಾಗೂ ಅಮೆರಿಕದ ರಾಷ್ಟ್ರಪಿತ. ಇವನು 1732 ಫೆಬ್ರವರಿ 22ರಂದು ವರ್ಜೀನಿಯದ ಬ್ರಿಜಸ್‍ಕ್ರೀಕ್‍ನಲ್ಲಿ ಜನಿಸಿದ. ತಂದೆ ಆಗಸ್ಟೀನ್ ವಾಷಿಂಗ್‍ಟನ್, ತಾಯಿ ಮೇರಿಬಾಲ್ ವಾಷಿಂಗ್‍ಟನ್. 4 ವರ್ಷದ ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಇವನು ತಾಯಿಯ ಪೋಷಣೆಯಲ್ಲಿ ಬೆಳೆದ. ಪ್ಲಾಂಟೇಷನ್ ಕಾರ್ಯಗಳು, ಬೇಟೆ, ಮೀನುಗಾರಿಕೆಯಲ್ಲಿ ಇವನಿಗೆ ಅಪಾರ ಆಸಕ್ತಿ ಇತ್ತು. ಬಡತನದ ಬೇಗೆಯಿಂದಾಗಿ ಇವನು ನಿಯತವಾಗಿ ಶಾಲೆಗೆ ಹೋಗಿ ಕಲಿಯಲಾಗ ಲಿಲ್ಲ. ಬಾಲ್ಯದಲ್ಲಿ ಇವನಿಗೆ ತಾಯಿಯೇ ಗುರುವಾಗಿದ್ದು ಆಕೆಯಿಂದಲೇ ನೈತಿಕ, ಧಾರ್ಮಿಕ ವಿಚಾರಗಳನ್ನು ಕಲಿತ. ಅನಂತರ ಭೂ ಮಾಪನ ವೃತ್ತಿಯಲ್ಲಿ ತರಬೇತಿ ಪಡೆದು ಭೂಮಾಪನಾಧಿಕಾರಿ ಯಾಗಿ ಕಾರ್ಯ ಆರಂಭಿಸಿದ (1749). ಅನಂತರ ತನ್ನ 21ನೆಯ ವಯಸ್ಸಿನಲ್ಲಿ ವರ್ಜೀನಿಯದ ಸೈನ್ಯ ಪ್ರವೇಶಿಸಿದ. 1755ರಲ್ಲಿ ನಡೆದ ಯುದ್ಧದಲ್ಲಿ ಫ್ರಾನ್ಸ್ ವಿರುದ್ಧ ಹೋರಾಡಿದ. ಅನಂತರ ವರ್ಜೀನಿಯ ಸೈನ್ಯದ ಮುಖಂಡನಾಗಿ ಆಯ್ಕೆಗೊಂಡ (1755-58). ಇವನು ಮಾರ್ಥಾಡಾಂಡ್ರಿಜ್ ಕಸ್ಟಿಸ್ ಎಂಬ ಶ್ರೀಮಂತ ವಿಧವೆಯನ್ನು 1759 ಜನವರಿ 6ರಂದು ವಿವಾಹವಾದ. ಹಲವು ವರ್ಷಗಳ ಕಾಲ ವರ್ಜೀನಿಯದ ಪ್ರಾಂತೀಯ ಸಭೆಯ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ.
  
ಅನಂತರ ಇವನು ಮೊದಲನೆಯ ಕಾಂಟಿನೆಂಟಲ್ ಕಾಂಗ್ರೆಸ್‍ನ ಪ್ರತಿನಿಧಿಯಾಗಿ ನೇಮಕವಾದ (1774). ಅಮೆರಿಕದ ಸ್ವಾತಂತ್ರ್ಯ ಹೋರಾಟ ಆರಂಭವಾಗುತ್ತಿದ್ದಂತೆ ಇವನು ಸಂಯುಕ್ತ ಸೈನ್ಯದ ಮುಖ್ಯದಂಡ ನಾಯಕನಾದ. ಸ್ವಾತಂತ್ರ್ಯ ಯುದ್ಧದ ನೇತೃತ್ವ ವಹಿಸಿದ. ಅನೇಕ ಸಮಸ್ಯೆಗಳ ನಡುವೆಯೂ ಅಮೆರಿಕ ಸೈನ್ಯವನ್ನು ಸಂಘಟಿಸಿ, ಬಲಿಷ್ಠ ಹಾಗೂ ನುರಿತ ಇಂಗ್ಲೆಂಡ್ ಸೈನ್ಯದೊಂದಿಗೆ ಹೋರಾಡಿ ಬ್ರಿಟಿಷರನ್ನು ಸೋಲಿಸಿ ಬೋಸ್ಟನ್‍ನಿಂದ ಕಾಲ್ತೆಗೆಯುವಂತೆ ಮಾಡಿದ. ಅನಂತರ 1776 ಜನವರಿ 4ರಂದು ಸ್ವಾತಂತ್ರ್ಯ ಘೋಷಿಸಲಾಯಿತು. ಈ ಮಧ್ಯೆ ಬ್ರಿಟಿಷರು ಸವನ್ನ, ಚಾಲ್ರ್ಸ್‍ಟೌನ್ ಮತ್ತು ವರ್ಜೀನಿಯದ ಯಾಕ್‍ಟೌನ್‍ಗಳನ್ನು ಗೆದ್ದರು. ನ್ಯೂಯಾರ್ಕ್‍ನಿಂದ ಹೊರಟ ಬ್ರಿಟಿಷ್ ಸೇನೆ ದಕ್ಷಿಣಕ್ಕೆ ಮುಂದುವರಿಯಿತು. ಅಷ್ಟರಲ್ಲೇ ಫ್ರೆಂಚ್ ಸೈನ್ಯದ ಸಹಾಯ ದೊರಕಿದ್ದು ಅಮೆರಿಕನ್ನರಿಗೆ ವರವಾಯಿತು. ಚಿಸಪೀಕ್‍ನಲ್ಲಿ ಬೀಡುಬಿಟ್ಟ ಫ್ರೆಂಚ್ ನೌಕೆಗಳು ಇವರಿಗೆ ಸಹಕಾರ ನೀಡಿದುವು. ಫ್ರೆಂಚರ ಬೆಂಬಲದಿಂದ ಇವನು ಕಾರ್ನ್‍ವಾಲೀಸ್ ನೇತೃತ್ವದ ಬ್ರಿಟಿಷ್ ಸೈನ್ಯ ಸೋತು ಶರಣವಾಗುವಂತೆ ಮಾಡಿದ (1781 ಸೆಪ್ಟಂಬರ್ 28). ಇಂಗ್ಲಿಷರ ಅಧೀನದಲ್ಲಿದ್ದ ಅಮೆರಿಕ ಸ್ವತಂತ್ರವಾಯಿತು.
	
ಹೊಸ ರಾಷ್ಟ್ರ ಉದಯದ ಸಂದರ್ಭದಲ್ಲಿ ನೂರಾರು ಸಮಸ್ಯೆಗಳನ್ನು ನಿವಾರಿಸಿ ಹೊಸ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸ ಲಾಯಿತು. 1787 ಮೇ 25ರಂದು ಫಿಲಡೆಲ್ಫಿಯದಲ್ಲಿ ರಾಷ್ಟ್ರೀಯ ಅಧಿವೇಶನ ಏರ್ಪಟ್ಟು, ಸಂವಿಧಾನದ ಮರು ಪರಿಶೀಲನ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಗೊಂಡ. ಇವನ ನೇತೃತ್ವದಲ್ಲಿ ರಚಿಸಿದ ಹೊಸ ಸಂವಿಧಾನವನ್ನು ಅಮೆರಿಕದ ಎಲ್ಲ ರಾಜ್ಯಗಳು ಅನುಸರಿಸುವಂತೆ ಒತ್ತಾಯಿಸಿದ. ಇವನು ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಅಧ್ಯಕ್ಷನಾಗಿ ಆಯ್ಕೆಗೊಂಡು, ಎರಡು ಅವಧಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಬೃಹತ್ ರಾಷ್ಟ್ರವಾಗಿ ಬೆಳೆಯಲು ಭದ್ರ ಬುನಾದಿ ಹಾಕಿದ (1789-97). ಇವನು ಅಧಿಕಾರಕ್ಕೆ ಬಂದ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನ ಒಂದು ಸ್ಪಷ್ಟಸ್ವರೂಪ ಪಡೆದು ಕೊಂಡಿತು. ಇವನು ಅಧ್ಯಕ್ಷ ನಾದ ಅವಧಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಕೇವಲ 11 ರಾಜ್ಯಗಳಿಂದ ಕೂಡಿತ್ತು. ಅನಂತರ ಇವನು 5 ಹೊಸ ರಾಜ್ಯಗಳನ್ನು ರಚಿಸಿ ದೇಶವನ್ನು ವಿಸ್ತರಿಸಿದ. ಇವನ ಕಾಲದಲ್ಲಿ ಅಮೆರಿಕ ರಾಷ್ಟ್ರಧ್ವಜವನ್ನು ಸ್ವೀಕರಿಸಲಾಯಿತು (1795). ಇವನ ಕಾಲದ ಪ್ರಮುಖ ಘಟನೆಗಳಿವು: 1789ರಲ್ಲಿ ನಡೆದ ಫ್ರೆಂಚ್ ಕ್ರಾಂತಿ, 1790ರಲ್ಲಿ ನಡೆದ ದೇಶದ ಪ್ರಥಮ ಜನಗಣತಿ (ಜನಸಂಖ್ಯೆ 39,29,214), ಕೈಗಾರಿಕಾ ಕ್ರಾಂತಿ (1790), ದಿ ಬಿಲ್ ಆಫ್ ರೈಟ್ಸ್ ಜಾರಿ (1791), ದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‍ಚೇಂಜ್ ಸ್ಥಾಪನೆ (1792), ಇವನ ಕಾಲದಲ್ಲಿ ಎಡ್ವರ್ಡ್‍ಜನ್ನರ್ ಎಂಬ ವಿಜ್ಞಾನಿ ಸಿಡಬುರೋಗಕ್ಕೆ ಲಸಿಕೆ ಕಂಡುಹಿಡಿದ (1796)-ಹೀಗೆ ಅನೇಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಯಿತು. 1797ರಲ್ಲಿ ಮೂರನೆಯ ಬಾರಿ ಮತ್ತೆ ಅಧ್ಯಕ್ಷನಾಗಿ ಮುಂದುವರಿಯಬೇಕೆಂದು ಒತ್ತಾಯ ಬಂದರೂ ಇವನು ನಿರಾಕರಿಸಿದ. ಇವನು ಅನುಸರಿಸಿದ ಈ ನೀತಿ ಮುಂದಿನ ಅಧ್ಯಕ್ಷರಿಗೆ ಮಾದರಿಯಾಯಿತು.

	ಅಧ್ಯಕ್ಷ ಪದವಿಯಿಂದ ನಿವೃತ್ತಿ ಹೊಂದಿದ ಅನಂತರ ಇವನು ತನಗೆ ಪ್ರಿಯವಾದ ಪ್ಲಾಂಟರ್ ವೃತ್ತಿಗೆ ಹಿಂತಿರುಗಿದ. ವರ್ಜೀನಿಯದ ಮೌಂಟ್ ವರ್ನನ್‍ನಲ್ಲಿ ಶೇಷಾಯುಷ್ಯ ಕಳೆದು 1799 ಡಿಸೆಂಬರ್ 14ರಂದು ನಿಧನಹೊಂದಿದ.	   
 (ಐ.ಬಿ.ಪಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ